ಭಾರತೀಯ ರೆಡ್‍ಕ್ರಾಸ್ ಸಂಸ್ಥೆ

	ದೇಶಾದ್ಯಂತ ಇರುವ (1982ರ ಗಣನೆ ಪ್ರಕಾರ) 654 ಬಿಡಿ ಸಂಘಗಳ ರಾಷ್ಟ್ರೀಯ ಒಕ್ಕೂಟ (ನ್ಯಾಷನಲ್ ಫೆಡರೇಷನ್). ಕೇಂದ್ರ ಸಂಘವಾಗಲಿ, ಹಲವಾರು ಗುಂಪಾಗಲಿ ಸಂಸ್ಥೆ ಎನ್ನಿಸಿಕೊಳ್ಳುವುದಿಲ್ಲ. ಕೇಂದ್ರ ಸಂಘ ಮತ್ತು ಎಲ್ಲ ಶಾಖೆಗಳು ಸೇರಿಯೇ ಸಂಸ್ಥೆ ಆಗಿದ್ದು ಇದರ ಕಾರ್ಯಾಚರಣೆ ಎಲ್ಲ ಬಿಡಿ ಕಾರ್ಯಾಚರಣೆಗಳ ಸಂಕಲನವೇ ಆಗಿದ್ದು ಕೇಂದ್ರ ಹಾಗೂ ಶಾಖೆಗಳು ಸದಾಕಾಲ ಜನರ ಸಂಕಟ ಪರಿಹಾರವಾಗುವಂತೆ, ಕಡಿಮೆ ಆಗುವಂತೆ, ತಪ್ಪುವಂತೆ ಕೂಡ ಮಾಡಲು ಎಲ್ಲ ಬಗೆಯ ಮಾನವೀಯ ಕಾರ್ಯಾಚರಣೆಗಳನ್ನೂ ಪ್ರೇರಿಸಿ, ಉತ್ತೇಜಿಸಿ ಮತ್ತು ಒಟ್ಟಿನಲ್ಲಿ ಶಾಂತಿ ಸ್ಥಾಪನೆಗೆ ಅನುಕೂಲ ಪರಿಸ್ಥಿತಿ ಒದಗುವಂತೆ ಮಾಡುತ್ತದೆ.

	ಕೇಂದ್ರ ಸಂಸ್ಥೆ ಹಾಗೂ ಸ್ಥಳೀಯ ಶಾಖೆಗಳ ಕಾರ್ಯಕ್ಷೇತ್ರ ಹಾಗೂ ಕಾರ್ಯವೈವಿಧ್ಯ ವರ್ಷ ವರ್ಷ ಹೆಚ್ಚುತ್ತಲೇ ಇವೆ. ಆದರೆ ಸದಾಕಾಲ ಸಂಸ್ಥೆ ತನ್ನ ಸೇವೆಯನ್ನು ಇನ್ನೂ ಹೆಚ್ಚು ಮಾಡಬೇಕಾಗಿತ್ತು ಎನ್ನಿಸಿಯೇ ಇದೆ. ಶಾಖೆಗಳು ಸಾಮಾನ್ಯವಾಗಿ ಸ್ಥಳೀಯವಾಗಿಯೇ ಸೇವೆ ಸಲ್ಲಿಸುವುವಾದರೂ ಪರಸ್ಪರ ಸಹಾಯ ಸಲಹೆಗಳನ್ನು ನೀಡುವುದೂ ಪಡೆಯುವುದೂ ಇದೆ. ಹಾಗೆಯೇ ಕೇಂದ್ರ ಸಂಘವೂ ಶಾಖೆಗಳ ನೆರವಿಗೆ ಬರುವುದಿದೆ. ಇಷ್ಟೇ ಅಲ್ಲದೆ ಪ್ರಪಂಚಾದ್ಯಂತ ಬೇರೆ ಬೇರೆ ರಾಷ್ಟ್ರಗಳ ರೆಡ್‍ಕ್ರಾಸ್ ಸಂಸ್ಥೆಗಳು ಭಾರತೀಯ ಸಂಸ್ಥೆಗೆ ಹಣ. ಸಾಮಗ್ರಿ ನೀಡಿ ನೆರವಾಗಿರುವುದೂ ಅದೇ ರೀತಿ ಭಾರತೀಯ ಸಂಸ್ಥೆ ಬೇರೆ ಬೇರೆ ರಾಷ್ಟ್ರಗಳ (ನೇಪಾಳ, ಯೆಮೆನ್, ಮಾರಿಷಿಯಸ್, ಇರಾನ್ ಇತ್ಯಾದಿ) ರೆಡ್‍ಕ್ರಾಸ್‍ಗಳ ನೆರವಿಗೆ ಹೋಗಿರುವುದೂ ಉಂಟು.

	ಪ್ರಪಂಚದಲ್ಲಿ ರೆಡ್‍ಕ್ರಾಸ್ ಚಟುವಟಿಕೆ 1864ರಲ್ಲಿ ಪ್ರಾರಂಭವಾಯಿತು. ಯೂರೋಪಿನ ಅನೇಕ ರಾಷ್ಟ್ರಗಳು ಜಿನೀವಾದಲ್ಲಿ ಸಭೆ ಸೇರಿ ಮಾಡಿಕೊಂಡ ಒಡಂಬಡಿಕೆಯಂತೆ ಯುದ್ದಕಾಲದಲ್ಲಿ ರೋಗ ಹಾಗೂ ಗಾಯಗಳಿಂದ ನರಳುತ್ತಿದ್ದ ಯುದ್ಧಾಳುಗಳ ಉಪಚಾರ ಚಿಕಿತ್ಸೆಗಳ ಬಗ್ಗೆ ಒಂದು ಸಾಮಾನ್ಯ ಕ್ರಮ ರೂಪಿತವಾಯಿತು. ಒಡಂಬಡಿಕೆಗೆ ರುಜುಹಾಕಿದ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯೇ ಮುಂದೆ ರೆಡ್‍ಕ್ರಾಸ್ ಸೊಸೈಟಿ ಎಂದಾಯಿತು. ಬಿಳಿ ಹಿನ್ನಲೆಯಲ್ಲಿ ಮೂಡಿಸಿದ ನೀಟ	 ಮತ್ತು ಅಡ್ಡ ಪರಸ್ಪರ ಕತ್ತರಿಸಿದ ಕೆಂಪು ಶಿಲುಬೆ ಆಕಾರದ ಧ್ವಜ ಈ ಸಂಸ್ಥೆಯ ವಿಶಿಷ್ಟ ಲಾಂಛನ ಎಂದು ನಿರ್ಧರಿಸಲಾಯಿತು. ಪ್ರಪಂಚಾದ್ಯಂತ ಈ ಗುರುತು ಏಕೈಕವಾಗಿ ರೆಡ್‍ಕ್ರಾಸ್ ಸಂಸ್ಥೆಯದೇ ಎಂದು ಸಾರಲಾಯಿತು. ಧ್ವಜದ ಸನಿಹದಲ್ಲಿ ಶತ್ರು ರಾಷ್ಟ್ರಗಳು ತಟಸ್ಥವಾಗಿರಬೇಕೆಂಬುದೂ ಆಚರಣೆಗೆ ಬಂತು. ಇದೇ ಅಂತರಾಷ್ಟ್ರೀಯ ರೆಡ್‍ಕ್ರಾಸ್ ಸಂಸ್ಥೆ. ಇದರ ಪ್ರಧಾನ ಕಛೇರಿ ಇಂದಿಗೂ ಜಿನೀವಾದಲ್ಲಿಯೇ ಇದ್ದು ಚಟುವಟಿಕೆ ನಡೆಸುತ್ತಿದೆ. ಶೀಘ್ರದಲ್ಲೇ ಇದರ ಧ್ಯೇಯ ಹಾಗೂ ಆಚರಣೆಗಳು ಪ್ರಪಂಚವಿಡಿ ಹರಡಿದವು. ಅನೇಕ ಯೂರೊಪೇತರ ರಾಷ್ಟ್ರಗಳಲ್ಲಿ ರೆಡ್‍ಕ್ರಾಸ್ ಸಂಸ್ಥೆಗಳು ಪ್ರಾರಂಭವಾದುವು. ಒಂದನೆಯ ಮಹಾಯುದ್ಧಕಾಲದಲ್ಲಿ ಕಾರ್ಯ ಎಸಗುತ್ತಿದ್ದ ವಿವಿಧ ರಾಷ್ಟ್ರಗಳ ರೆಡ್‍ಕ್ರಾಸ್ ಸಂಸ್ಥೆಗಳ ಒಕ್ಕೂಟ. ಆಗ ಯೂರೊಪಿನಲ್ಲಿದ್ದ ಅಮೆರಿಕ ರೆಡ್‍ಕ್ರಾಸ್ ಪ್ರತಿನಿಧಿ ಎಚ್. ಪಿ. ಡೆವ್‍ಸನ್ ಎಂಬಾತನಿಂದ 1919ರಲ್ಲಿ ಸ್ಥಾಪಿತವಾಗಿ, ಅದರ ಮುಖ್ಯ ಕಛೇರಿ ಪ್ಯಾರಿಸ್ಸಿನಲ್ಲಿರತಕ್ಕದ್ದು ಎಂದು ನಿರ್ಧಾರವಾಯಿತು.

	ಆದರೆ ಯುದ್ಧಕಾಲದಲ್ಲಿ ಸೈನ್ಯವನ್ನು ಹಿಂಬಾಲಿಸುವ ಚರ ಚಿಕಿತ್ಸಾಲಯ (ಆಂಬ್ಯುಲೆನ್ಸ್) ಸುಮಾರು 800 ವರ್ಷಗಳ ಹಿಂದೆಯೇ ಅಂದರೆ ಯೂರೊಪಿನಲ್ಲಿ ಕ್ರೂಸೇಡ್ ಧರ್ಮಯುದ್ಧಗಳಾಗುತ್ತಿದ್ದ ಕಾಲದಲ್ಲಿಯೇ ಏರ್ಪಟ್ಟಿತ್ತು. ಇದು ಯುದ್ಧರಂಗದ ಹಿಂಬದಿಯಲ್ಲಿ ಚಲಿಸುತ್ತ ಗಾಯಾಳುಗಳ ಚಿಕಿತ್ಸೆ ನಡೆಸುತ್ತಿತ್ತು. ಆದರೆ 16ನೆಯ ಶತಮಾನದಷ್ಟು ಹೊತ್ತಿಗೆ ಇಂಥ ಏರ್ಪಾಡು ನಿರ್ನಾಮವಾಯಿತು. 1831ರಲ್ಲಿ ಸೇಂಟ್‍ಜಾನ್ಸ್ (ಮತೀಯ) ಭ್ರಾತೃವರ್ಗ (ಆರ್ಡರ್) ಇದನ್ನು ಪುನಃ ಸ್ಥಾಪಿಸಿತು. 1877ರಲ್ಲಿ ಸೇಂಟ್ ಜಾನ್ಸ್ ಆಂಬ್ಯುಲನ್ಸ್ ಅಸೋಸಿಯೇಷನ್ ಎಂದಾಗಿ ಪ್ರತ್ಯೇಕವಿಭಾಗ ಪ್ರಾರಂಭವಾಗಿ ಅಪಘಾತಗಳಲ್ಲಿ ಪ್ರಥಮಚಿಕಿತ್ಸೆ, ಮನೆಯಲ್ಲಿಯೇ ರೋಗಿಗಳ ಶುಶ್ರೂಷೆ ಇವುಗಳಲ್ಲಿ ಶಿಕ್ಷಣಕೊಡಲು ಪ್ರಾರಂಭಿಸಿತು. ಸಂಸ್ಥೆಯ ನೆಲೆಯಲ್ಲೇ ಇಂಥ ಉಪಚಾರ ಕೊಡಲು ರೋಗಿ ಮತ್ತು ಗಾಯಾಳುಗಳನ್ನು ಕೈಗಾಡಿಗಳಲ್ಲಿ ಅನಂತರ ಕುದುರೆಗಳ ಇಲ್ಲವೇ ಬೈಸಿಕಲ್ಲುಗಳ ಮೇಲೆ ಮತ್ತು ಸಾಗುಡೋಲಿಗಳಲ್ಲಿ (ಸ್ಟ್ರೆಚರ್) ಒಯ್ಯುವುದು ರೂಢಿಗೆ ಬಂತು. ಇಂದಿನ ಆ್ಯಂಬ್ಯುಲನ್ಸ್ ವ್ಯಾನುಗಳಿಗೆ ಇದೆ ಮೂಲ 1864ರಲ್ಲಿ ಪ್ರಾರಂಭವಾದ ರೆಡ್‍ಕ್ರಾಸ್ ಸಂಸ್ಥೆಯ ಚಟುವಟಿಕೆಗಳು ಪ್ರಾಥಮಿಕವಾಗಿ ಯುದ್ಧರಂಗಕ್ಕೆ ಮೀಸಲಾಗಿದ್ದರೂ ಅಲ್ಲಿಗೇ ಸೀಮಿತವಾಗದೆ ಶಾಂತಿ ಕಾಲದಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೂ ವ್ಯಾಪಿಸಬೇಕು ಎಂಬ ಅಭಿಪ್ರಾಯ ಕ್ರಮೇಣ ಮೂಡಿ ಅಂತೆಯೇ ನಿರ್ಧಾರವಾಗಿ ಅದರಂತೆ ಬ್ರಿಟಿಷ್ ರೆಡ್‍ಕ್ರಾಸ್ ಸಂಸ್ಥೆ ವಿಶ್ರಾಂತ ಸೈನಿಕರಿಗೆ ಮತ್ತು ಗತಿಸಿದ ಸೈನಿಕರ ಸಂಸಾರ ಹಾಗೂ ಆಶ್ರಿತರಿಗೆ ವಿದ್ಯಾಭ್ಯಾಸ ರೋಗೋಪಚಾರ, ಹಿತಸಾಧನೆ ಇತ್ಯಾದಿಗಳಿಗಾಗಿ ಧನಸಹಾಯ ಮಾಡಲು ಪ್ರಾರಂಭಿಸಿತು. ರೋಗ ನಿರ್ಮೂಲನ ಕಾರ್ಯಾಚರಣೆ, ದಾದಿಯರ ತರಪೇತಿ ಮುಂತಾದ ಸಾರ್ವಜನಿಕ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. ಕಿರಿಯರ ಶಾಖೆ (ಜ್ಯೂನಿಯರ್ ರೆಡ್‍ಕ್ರಾಸ್) ಪ್ರಾರಂಭವಾಗಿ ಕಿರಿಯರಿಗೆ ಪ್ರಥಮ ಚಿಕಿತ್ಸೆ ಹಾಗೂ ಮನೆಯಲ್ಲಿ ರೋಗ ಶುಶ್ರೂಷೆಗಳ ತರಪೇತಿಯೂ ಕೊಡಲ್ಪಡುವಂತೆ ನಿರ್ಧಾರವಾಯಿತು ಅನೇಕ ಆರೋಗ್ಯ ಕೇಂದ್ರಗಳೂ ತೆರೆಯಲ್ಪಟ್ಟವು. ಹೀಗಾಗಿ ಬ್ರಿಟನ್ನಿನಲ್ಲಿ ಸಾರ್ವಜನಿಕ ಹಾಗೂ ಸೈನಿಕ ತುರ್ತುಪರಿಸ್ಥಿತಿಗಳಲ್ಲಿ ಮತ್ತು ಶಾಂತಿಕಾಲದಲ್ಲಿ ಜನಾರೋಗ್ಯ ವಿಷಯದಲ್ಲಿ ರೆಡ್‍ಕ್ರಾಸ್ ಸಂಸ್ಥೆ ಸಕ್ರಿಯಪಾತ್ರ ವಹಿಸುವಂತಾಯಿತು. ಸುಮಾರು ಇಂಥದೇ ಕಾರ್ಯಕ್ರಮ ಸೇಂಟ್‍ಜಾನ್ಸ್ ಆ್ಯಂಬ್ಯುಲನ್ಸ್ ಅಸೋಸಿಯೇಷನ್ನಿನಲ್ಲಿಯೂ ಜರಗುತ್ತಿತ್ತೆಂದು ಮೇಲೆ ಹೇಳಿದೆ. ರಾಜಮನ್ನಣೆ (ರಾಯಲ್ ಚಾರ್ಟರ್) ಪಡೆದ ಎರಡು ಸಂಸ್ಥೆಗಳು ಒಂದೇ ರೀತಿಯ ಸೇವೆಯನ್ನು ಬೇರೆ ಬೇರೆಯಾಗಿ ಮಾಡುವ ಬದಲು ಅವೆರಡೂ ಜಂಟಿಯಾಗಿ ನಿರ್ವಹಿಸುವುದು ಒಳ್ಳೆಯದು ಎನ್ನಿಸಿತು. ಅದರಂತೆ ಸೇಂಟ್ ಜಾನ್ಸ್ ಆ್ಯಂಬ್ಯುಲನ್ಸ್ 1914ರಲ್ಲಿ ಬ್ರಿಟಿಷ್ ರೆಡ್‍ಕ್ರಾಸಿನೊಡನೆ ವಿಲೀನವಾಗಿ ಅಲ್ಲಿಂದಾಚೆಗೆ ಅದರೊಡನೆ ಜಂಟಿಕಾರ್ಯಾಚರಣೆಯಲ್ಲಿ ತೊಡಗಿದೆ. ಆದರೂ ಯುದ್ಧರಂಗಕ್ಕೆ ಸಂಬಂಧಿಸಿದಂತೆ ಮೇಲೆ ಹೇಳಿರುವ ತನ್ನದೇ ಚಟುವಟಿಕೆಗಳನ್ನು ರೂಢಿಸಿಕೊಂಡಿದೆ.

	ಸ್ವಾಭಾಮಿಕವಾಗಿಯೇ ಬ್ರಿಟನ್ನಿನಲ್ಲಿ ಆಚರಣೆಯಲ್ಲಿದ್ದ ಇಂಥ ಸಂಸ್ಥೆ ಮತ್ತು ಅದರ ಕಾರ್ಯಕ್ರಮಗಳು ಬ್ರಿಟನ್ನಿನ ಅಧೀನದಲ್ಲಿದ್ದ ಹಾಗೂ ತಕ್ಕಮಟ್ಟಿಗೆ ಮುಂದುವರಿದಿದ್ದ ಭಾರತದಂಥ ದೇಶಗಳಲ್ಲಿ ಸ್ಥಾಪಿಸಲ್ಪಟ್ಟವು. ಹೀಗೆ ಭಾರತದಲ್ಲಿ ಉದಯವಾದ ರೆಡ್‍ಕ್ರಾಸ್ ಮತ್ತು ಸೇಂಟ್ ಜಾನ್ಸ್ ಆ್ಯಂಬ್ಯುಲನ್ಸ್ ಜಂಟಿ ಸಂಸ್ಥೆ ಸ್ವಾತಂತ್ರ್ಯಾನಂತರವೂ ಮುಂದುವರಿದಿದ್ದು ಕಾರ್ಯಾಚರಣೆಯಲ್ಲಿ ತೊಡಗಿವೆ. ಭಾರತೀಯ ರೆಡ್‍ಕ್ರಾಸ್ : ಸಂಸ್ಥೆಯಿಂದ ಇಲ್ಲಿಯತನಕ ಆಗಿರುವ ಸೇವೆಗಳನ್ನು ಸ್ಥೂಲವಾಗಿ ಸಂಗ್ರಹಿಸಿದೆ
1 ನೈಸರ್ಗಿಕ ವಿಪತ್ತುಗಳ ಕಾಲದಲ್ಲಿ (ನ್ಯಾಚುರಲ್ ಕೆಲಾಮಿಟಿಸ್) ಸೇವೆ : ನೈಸರ್ಗಿಕ ಸಂಪತ್ತುಗಳಿಂದ ಜನತೆಗೆ ಸಂಭವಿಸಿದ ಬಹುಮುಖ ಮತ್ತು ವ್ಯಾಪಾಕ ಕಷ್ಟನಷ್ಟಗಳ ಬಗ್ಗೆ ಸಹಾಯ ಮಾಡುವಿಕೆ. ಪದೇಪದೇ ಉಂಟಾಗುವ ಇಂಥ ವಿಪತ್ತುಗಳ ಸಂದರ್ಭಗಳಲ್ಲಿ ಪಡೆದ ಅನುಭವಗಳಿಂದ ಅಂಥ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮ ರೂಢಿಸಿಕೊಂಡಿರುವುದಲ್ಲದೆ ಪೂರ್ವಸಿದ್ಧತೆÉಗಳಿಂದ ಅಣಿ ಮಾಡಿದ ದಾಸ್ತಾನು ಮಳಿಗೆಗಳನ್ನು (ಮೇರ್‍ಹೌಸಸ್) ಸ್ಥಾಪಿಸಿರುವುದು (ಉದಾಹರಣೆಗೆ ಅಸ್ಸಾಮ್, ತಮಿಳುನಾಡು, ಆಂಧ್ರಪ್ರದೇಶ ಇತ್ಯಾದಿ); ಸ್ಥಳೀಯಾವಾಗಿ ಸ್ಥಿರ ಹಾಗೂ ಸಂಚಾ ಆಸ್ಪತ್ರೆ ಸ್ಥಾಪನೆ; ಸುಂಟರಗಾಳಿ ಸಮಯದಲ್ಲಿ ಜನತೆ ಮತ್ತು ಕಾಲ್ನಡೆಗಳ ಸ್ಥಳಾಂತರ ಮಾಡಬೇಕಾದಾಗ ವಾತಾವರಣಕ್ಷೋಭೆಯ ತೀವ್ರತೆ ತಡೆದುಕೊಳ್ಳುವಷ್ಟು ದೃಢವಾದ ದಂಗಾಮಿ ವಸತಿ (ಸೈಕ್ಲೋನ್ ಶೆಲ್ಟರ್) ನಿರ್ಮಾಣ, ಬೇರೆ ಸಮಯಗಳಲ್ಲಿ ಇವನ್ನು ಆರೋಗ್ಯ ಕೇಂದ್ರ, ವಯಸ್ಕ ಶಿಕ್ಷಣ, ವೃತ್ತಿಶಿಕ್ಷಣ ಇತ್ಯಾದಿಗಳಾಗಿಯೂ ಬಳಸಿಕೊಳ್ಳುವಿಕೆ; ಇತ್ಯಾದಿ. ಇದ್ದಕ್ಕಾಗಿ ವಿಪತ್ತು ಪರಿಹಾರನಿಧಿ ಎಂದು ಪ್ರತ್ಯೇಕವಾಗಿ ಮೊಬಲಗನ್ನು ಅನೇಕ ಶಾಖೆಗಳು ಮೀಸಲಾಗಿ ಇಟ್ಟಿವೆ.

	2. ಸೈನ್ಯಕ್ಕೆ ಸೇವೆ : ಸ್ವಪ್ರೇರಿತವಾದ ಸಹಾಯಕ ಅಂಗವಾಗಿ ಸೈನ್ಯದ ವೈದೈಕಿಯ ಭಾಗಕ್ಕೆ ನೆರವಾಗುವುದಕ್ಕೆಂದೇ ರೆಡ್‍ಕ್ರಾಸ್ ಸಂಸ್ಥೆ ಪ್ರಾರಂಭವಾದದ್ದು ಎನ್ನುವುದನ್ನು ಮರೆಯದೆ ಆ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು; ಸೈನ್ಯದಿಂದ ವಿಶ್ರಾಂತರಾದವರಿಗೆ ವೈಯುಕ್ತಿಕ ಸಹಾಯ (ವಯಸ್ಕ ಅಶÀಕ್ತರಿಗೆ ಅಂಗಡಿಯಿಂದ ಸಾಮಾನು ತರುವಂಥದು ಕೂಡ); ಕೈ ಕಾಲು ಊನವಾಗಿ ನಿಸ್ಸಹಾಯರಾಗಿರುವ ಸ್ಯನಿಕರಿಗೆಂದೇ ವಸತಿ ಸ್ಥಾಪನೆ (ಇಂಥದು ಬೆಂಗಳೂರಿನಲ್ಲಿದೆ) ಇತ್ಯಾದಿ.
	3. ರಕ್ತದಾನ : ಪ್ರಪಂಚದಲ್ಲಿ ಎಲ್ಲಿಯೋ ಯಾರೋ ಒಬ್ಬರು ದಿನದ 24 ಗಂಟೆಗಳಲ್ಲಿ ರೆಡ್‍ಕ್ರಾಸ್ ಸಂಸ್ಥೆಯ ಮಾರೀಫತ್ತಿನಲ್ಲಿ ಪ್ರತಿಮಿನಿಟೂ ರಕ್ತದಾನ ಮಾಡುತ್ತಲೇ ಇದ್ದಾರೆ; ಆದರೂ ಇದು ಅಗತ್ಯ ಪೂರೈಕೆಗೆ ಬಲುದೂರ ಎಂದು ಹೇಳಲಾಗಿದೆ. ರÀಕ್ತದಾನ ಮಾಡುವಂತೆ ವ್ಯಕ್ತಿಗಳನ್ನು ಪ್ರೇರಿಸುವುದು; ರಕ್ತನಿಧಿ (ಬ್ಲಡ್‍ಬ್ಯಾಂಕ್) ಏರ್ಪಡಿಸಿವುದು (ಇಂಥ ನಿಧಿಗಳು 1982ರಲ್ಲಿ 51 ಇದ್ದುವು); ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಸಂಗ್ರಹಿಸಿದ ರಕ್ತವನ್ನು ಸ್ಥಳೀಯ ಆಸ್ಪತ್ರೆಯ ರಕ್ತನಿಧಿಗೆ ಸಾಗಿಸುವುದು ಇತ್ಯಾದಿ.

	4. ಹೆರಿಗೆ ಮತ್ತು ಶಿಶುಸಂರಕ್ಷಣ ಕೇಂದ್ರಗಳು: ಇಲ್ಲಿ ಮಕ್ಕಳಿಗೆ ಹಾಲಿನ ವಿತರಣೆ, ರೋಗ ರಕ್ಷಣೆಗಾಗಿ ಚುಚ್ಚುಮದ್ದು ನೀಡಿಕೆ, ಗರ್ಭಿಣಿಯರ ಪ್ರಸವ ಪೂರ್ವ ತನಿಖೆಗಳು, ಕುಟುಂಬ ಯೋಜನೆಗಾಗಿ ಸ್ತ್ರೀ ಪುರುಷರ ಅಗತ್ಯಗಳ ಪೂರೈಕೆ ಇತ್ಯಾದಿಗಳಿಗೆ ಗಮನ ಕೊqಲಾಗುತ್ತದೆ. ಈ ಕಾರ್ಯಾಚರಣೆಗೆಂದೇ ಕೇಂದ್ರ ಸಂಸ್ಥೆಯಲ್ಲಿ ಒಂದು ವಿಭಾಗವಿದ್ದು ಅದಕ್ಕೆ ಕೇಂದ್ರ ಸರ್ಕಾರದಿಂದ ಧನ ಸಹಾಯ ಒದಗುತ್ತಿದೆ. ಇದನ್ನು ಕೇಂದ್ರಸಂಸ್ಥೆ ವಿವಿಧ ಶಾಖೆಗಳಿಗೆ ಯಥಾ ಶಕ್ತಿ ನೀಡುವುದಿದೆ. ಸೂಲಗಿತ್ತಿಯರ ಹಾಗೂ ದಾದಿಯರ ತರಬೇತಿ. ಹೆರಿಗೆ ಶಿಶುಸಂರಕ್ಷಣೆಗಳ ಬಗ್ಗೆ ಪ್ರಚಾರ ಇತ್ಯಾದಿಗಳನ್ನು ಈ ವಿಭಾಗ ಕೈಗೊಂಡಿದೆ.

5. ಸಾಮಾಜಿಕ ಸೇವೆ: ದಿಕ್ಕಿಲ್ಲದ ಮಕ್ಕಳು ಹಾಗೂ ಮುದುಕರಿಗಾಗಿ ವಸತಿ, ಬಾಲ ವಿಹಾರಗಳು ಉದ್ಯೋಗಸ್ಥ ಮಹಿಳೆಯರ ವಸತಿ, ಕುಷ್ಠರೋಗಿUಳ ವಸತಿ, ಇಂಥವುಗಳ ನಿರ್ಮಾಣ, ಅಂಗವಿಹೀನರಿಗೆ ಅನುಕೂಲ ವೃತ್ತಿಗಳ ತರಪೇತಿ ಹಾಗೂ ಅವರಿಗೆ ಕೃತಕ ಅಂಗಗಳನ್ನು ನೀಡುವುದು ಶಸ್ತ್ರಕಿಯೆಯಿಂದ ಊನ ದುರಸ್ತಿ ಮಾಡಿಸುವುದು.

6.ವೈದ್ಯಕೀಯ: ಸ್ಥಿರ ಹಾಗೂ ಚರ ಆಸ್ಪೆತ್ರೆಗಳ ಸ್ಥಾಪನೆ. ಮಾನಸಿಕ ರೋಗಿಗಳಿಗೆ, ಕ್ಷಯರೋಗಿಗಳಿಗೆ, ಅಂಧರಿಗೆ ಅಂಗವಿಕಲರ ಭೌತಿಕ ಚಿಕಿತ್ಸೆಗೆ (ಫಿಸಿಯೋ ತೆರಪಿ) ಇತ್ಯಾದಿಗಳಿಗೆಂದೇ ಮೀಸಲಾದ ಆಸ್ಪೆತ್ತೆಗಳ ಸ್ಥಾಪನೆ.

7. ರೋಗ ಶುಶ್ರೂಷೆ (ಸಿಕ್ ನರ್ಸಿಂಗ್) : ಸಾರ್ವಜನಿಕ ಆರೋಗ್ಯ ಪ್ರಚಾರ ಇವುಗಳಿಗೆ ಅಗತ್ಯವಾದ ದಾದಿಯರ ತರಪೇತಿ ಕೇಂದ್ರ ಸಂಸ್ಥೆಯಲ್ಲಿ ಇದಕ್ಕಾಗಿಯೇ ಮೀಸಲಾದ ಎಡ್ವಿನಾ ಮೌಂಟ್ ಬ್ಯಾಟನ್ ಸ್ಮಾರಕನಿಧಿ ಇದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಫ್ಲಾರೆನ್ಸ್ ನೈಟಿಂಗೇಲ್ ಸ್ಮಾರಕ ನಿಧಿ, ರಾಜಕುಮಾರಿ ಅಮೃತ ಕೌರ್ ಸ್ಮಾರಕ ನಿಧಿ ಮುಂತಾದವು ವಿದ್ಯಾರ್ಥಿ ವೇತನ ನೀಡುತ್ತವೆ.
	8. ಕಿರಿಯರ ವಿಭಾಗ (ಜ್ಯೂನಿಯರ್ ರೆಡ್‍ಕ್ರಾಸ್): ಯುವಕರ ಸಾರ್ವಜನಿಕ ನಡೆವಳಿಕೆಗಳ ಮೇಲ್ಮೆಗಾಗಿ ಶ್ರಮಿಸುವಿಕೆ.
	9. ಸೇಂಟ್ ಜಾನ್ಸ್ ಆ್ಯಂಬ್ಯುಲನ್ಸ್ ವಿಭಾಗ: ಪ್ರಥಮಚಿಕಿತ್ಸೆ ರೋಗಿ ಶುಶ್ರೂಷೆ ಇತ್ಯಾದಿಗಳಲ್ಲಿ ತರಬೇತಿಕೊಟ್ಟು ಪರೀಕ್ಷಿಸಿ ಅರ್ಹತಾ ಪತ್ರ ಕೊಡುವುದು.

10 ರೆಡ್‍ಕ್ರಾಸ್ ಸಂಸ್ಥೆ, ಅದರ ಧ್ಯೇಯಗಳು, ಚಟುವಟಿಕೆಗಳು ಮುಂತಾದವುಗಳ ವಿಚಾರವಾಗಿ ಉತ್ತಮ ಪ್ರಚಾರ ಮಾಡಿರುವ ಶಾಖೆಗಳಿಗೆ ಬಹುಮಾನ ನೀಡಿಕೆ ಇತ್ಯಾದಿ.

ಕರ್ನಾಟಕದಲ್ಲಿ 18 ಜಿಲ್ಲಾ ಶಾಖೆಗಳೂ 24 ಅಧೀನ ಶಾಖೆಗಳೂ ಇದ್ದು (1982) ಅವುಗಳಲ್ಲಿ ಸುಮಾರು 8000 ಜನ ಸದಸ್ಯರಿದ್ದರು. ಕಿರಿಯರ ಶಾಖೆಯಲ್ಲಿ ಸುಮಾರು 38.000 ಯುವಕ ಸದಸ್ಯರಿದ್ದರು. ಇವರಲ್ಲಿ ಅನೇಕರು ಚಟುವಟಿಕೆಗಳಲ್ಲಿ ಸಕ್ರಿಯ ಭಾವಗಹಿಸಿದ್ದರೂ ಇದು ಹೆಮ್ಮೆಯ ವಿಷಯವೇನೂ ಅಲ್ಲ. ರೆಡ್‍ಕ್ರಾಸ್‍ಸಂಸ್ಥೆಯ ಚಟುವಟಿಕೆ ಹಾಗೂ ಸದಸ್ಯ ಸಂಖ್ಯೆ ಪಂಜಾಬ್ ಮತ್ತು ಹರಿಯಾಣಗಳಲ್ಲಿರುವಷ್ಟು ಮತ್ತೆ ಯಾವ ಶಾಖೆಯಲ್ಲೂ ಇಲ್ಲ. ಇವೆರಡು ಪ್ರಾಂತ್ಯಶಾಖೆಗಳಲ್ಲೇ ಸುಮಾರು 16 ಲಕ್ಷ ಹಿರಿಯ ಮತ್ತು 44 ಲಕ್ಷ ಕಿರಿಯ ಸದಸ್ಯರಿದ್ದರು (1982). ಕರ್ನಾಟಕದ ರೆಡ್‍ಕ್ರಾಸ್ ಸಂಸ್ಥೆ ಅತಿವೃಷ್ಟಿ ಅನಾವೃಷ್ಟಿ ಸ್ಥಿತಿಗಳು, ಬೆಂಕಿ ಪ್ರಕರಣಗಳು ಇತ್ಯಾದಿಗಳಲ್ಲಿ ಜನತೆಗೆ ಉದ್ಭವಿಸಿದ ಕಷ್ಟನಷ್ಟಗಳ ಶಮನಕ್ಕಾಗಿ ಶ್ರಮಿಸಿದೆ. ಸಂತ್ರಸ್ತರಿಗೆ ಹೊದಿಕೆ, ಉಡುಗೆ, ಹಾಲಿನಪುಡಿ ಸಾಬೂನು ಇತ್ಯಾದಿಗಳನ್ನು ಸರಬರಾಜು ಮಾಡಲಾಗಿದೆ. ಬೆಂಗಳೂರಿನಲ್ಲಿ ಒಂದು ವೈದ್ಯ ಶಾಲೆಯನ್ನು ಸ್ಥಾಪಿಸಿದೆ. ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಶೇಖರಿಸಿದ ರಕ್ತವನ್ನು ಸರ್ಕಾರಿ ಆಸ್ಪತ್ರೆಗಳಲ್ಲಿರುವ ರಕ್ತನಿಧಿಗಳಿವೆ ಸಾಗಿಸಿ ಸಹಾಯ ಮಾಡಿದೆ. ಅಂಗವಿಕಲರಿಗೆ ಕೃತಕ ಅಂಗಗಳು. ಗಾಲಿಕುರ್ಚಿ, ಮೂರು ಗಾಲಿ ಬೈಸಿಕಲ್ಲುಗಳು ಇತ್ಯಾದಿಗಳನ್ನು ದಾನ ಮಾಡಿದೆ. ಗರ್ಭಿಣಿ ಹಾಗೂ ಶಿಶುರಕ್ಷಣೆ ಕ್ಷೇತ್ರಗಳಲ್ಲಿ ಪ್ರಸವಪೂರ್ವ ಹಾಗೂ ಪ್ರಸವೋತ್ತರ ಮುನ್ನೆಚ್ಚರಿಕೆ ಪರೀಕ್ಷೆ ತನಿಖೆಗಳನ್ನು ಮಾಡಿ ಯುಕ್ತ ಉಪಚಾರ ಕ್ರಮಗಳನ್ನು ಕೈಗೊಂಡಿದೆ. ಗರ್ಭಿಣಿಯರಿಗೆ ಮತ್ತು ಶಿಶುಗಳಿಗೆ ರೋಗ ನಿರೋಧಕ ಚುಚ್ಚು ಮದ್ದು ಕೊಡುವುದು ಅಲ್ಲದೆ ಕುಟುಂಬಕಲ್ಯಾಣ ಕಾರ್ಯ ಕ್ರಮವಾಗಿ ಗರ್ಭನಿರೋಧಕ ಸಲಕರಣೆಗಳನ್ನು ನೀಡುವುದು ಹಾಗೂ ಶಸ್ತ್ರಚಿಕಿತ್ಸೆ ಮಾಡುವುದು ಇತ್ಯಾದಿ ಕ್ರಮಗಳನ್ನೂ ಕೈಗೊಂಡಿದೆ. ಇವೆಲ್ಲವನ್ನೂ ಮುಂದುವರಿಸಿಕೊಂಡು ಹೋಗುವುದಲ್ಲದೆ ಅಗತ್ಯ ಬಿದ್ದಂತೆ ಚಟುವಟಿಕೆಗಳ ವಿಸ್ತರಣೆಗೂ ಸಿದ್ದವಿದೆ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ